Skip to content

ಶುಕ್ರ ಸಂಗಮ

Vinay

೨೦೧೨ನೆಯ ಜೂನ್ ೬ನೆಯ ಬೆಳಿಗ್ಗೆ, ಭಾರತದಲ್ಲಿ ಸೂರ್ಯ ಹುಟ್ಟುತ್ತಿರುವಾಗ, ಒಂದು ಅಧ್ಭುತ ದೃಶ್ಯ ಕಾಣಿಸುತ್ತದೆ. ಸೂರ್ಯನ ಮೇಲೆ ಒಂದು ಚಿಕ್ಕ ಚುಕ್ಕೆ. ನೋಡು ನೋಡುತ್ತಿದ್ದಂತೆಯೇ ಸೂರ್ಯನ ಮುಖದ ಮೇಲೆ ಜಾರುತ್ತದೆ. ಸುಮಾರು ೧೦:೩೦ ಗಂಟೆಗೆ ಪೂರ್ತಿ ಹೊರಟುಹೋಗುತ್ತದೆ.

ಇದು ಶುಕ್ರ ಗ್ರಹ. ಭೂಮಿ ಮತ್ತು ಸೂರ್ಯರ ಮಧ್ಯೆ ಅಡ್ಡ ಬಂದು ಹೋಗುತ್ತದೆ. ಇದೂ ಒಂದು ತರಹದ ಸೂರ್ಯ ಗ್ರಹಣ, ಆದರೆ ಸೂರ್ಯ ಪೂರ್ತಿ ಮುಚ್ಚಿಹೊಗಿರುವುದಿಲ್ಲ. ಇದನ್ನು ಟ್ರಾನ್ಸಿಟ್ (ಎಂದರೆ ಮುಂದಿನಿಂದ ಚಲಿಸುವುದು) ಎನ್ನುತ್ತಾರೆ. ಹಿಂದೊಮ್ಮೆ ೮ ವರ್ಷಗಳ ಹಿಂದೆ, ೨೦೦೪ರಲ್ಲಿ ಆಗಿದ್ದು, ಈ ಹೊತ್ತಿನಲ್ಲಿ ಆದಮೇಲೆ ಮತ್ತೊಮ್ಮೆ ಆಗಬೇಕಾದರೆ ಒಂದು ಶತಮಾನ ಮೀರಬೇಕು.

ಈ ಘಟನೆಯ ಬಗ್ಗೆ ಬಹಳಷ್ಟು ವಿಷಯ ಸಂಗ್ರಹವಾಗಿದೆ www.transitofvenus.org ಎಂಬಲ್ಲಿ. ನೀವಿರುವ ಜಾಗದಲ್ಲಿ ಎಷ್ಟು ಹೊತ್ತಿಗೆ ಸಂಗಮ ಶುರುವಾಗುತ್ತದೆ, ಯಾವಾಗ ಮುಗಿಯುತ್ತದೆ, ಇದನ್ನು ತಿಳಿಯಲು transitofvenus.nl/wp/where-when/local-transit-times/ ಎಂಬಲ್ಲಿ ನೋಡಿ.

ಜಗತ್ತಿನಾದ್ಯಂತ ಖಗೋಳ ವಿಜ್ಞಾನಿಗಳು ಮತ್ತು ಹವ್ಯಾಸಿಗಳು ಈ ಸಂಗಮವನ್ನು ಉತ್ಸಾಹದಿಂದ ನಿರೀಕ್ಷಿಸುತ್ತಿದ್ದಾರೆ. ೧೭ನೆಯ ಶತಮಾನದಲ್ಲಿ ಇದರ ಮಹತ್ತನ್ನು ಗುರುತಿಸಿದಾಗಿನಿಂದ ಪ್ರತಿ ಶತಮಾನದಲ್ಲಿಯೂ ಇದು ಆದಾಗಲೆಲ್ಲಾ ಇದನ್ನು ನೋಡಲು, ಅಳತೆ ಮಾಡಲು, ಇದರಿಂದ ಸೌರವ್ಯೂಹದ ವಿಸ್ತಾರವನ್ನು ಅರ್ಥ ಪಡಿಸಿಕೊಳ್ಳಲು, ವಿಜ್ಞಾನಿಗಳು ಪ್ರಪಂಚದಲ್ಲೆಲ್ಲಾ ಪ್ರಯಾಣಿಸಿದ್ದಾರೆ, ಪ್ರಯಾಣಿಸುತ್ತಿದ್ದಾರೆ.

ಈ ಶುಕ್ರ ಸಂಗಮದ ಬಗ್ಗೆ, ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ, ರಾಷ್ಟ್ರೀಯ ರೇಡಿಯೋ ಆಸ್ಟ್ರೋಫಿಸಿಕ್ಸ್ ಕೇಂದ್ರದ, ನೀರಜ್ ಮೋಹನ್ ರಾಮಾನುಜಮ್ ಮತ್ತು ರೇಷ್ಮಾ ಬರವೇ ಅವರು ಒಂದು ಉತ್ತಮವಾದ ಚಿಕ್ಕ ಪುಸ್ತಕವನ್ನು ಬರೆದು ನಿದರ್ಶಿಸಿದ್ದಾರೆ. ಇದನ್ನು ಭಾರತದ ಬಗೆಬಗೆಯ ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ; ಕನ್ನಡಕ್ಕೆ ಗೀತಾ ಕೈದಾಳ ಗಣೇಶರವರು ಅನುವಾದಿಸಿದ್ದಾರೆ. ಇದನ್ನು ಓದಲು, ನಿಮ್ಮ ಕಂಪ್ಯೂಟರಿಗೆ ಇಳಿಸಿಕೊಳ್ಳಲು, mutha.ncra.tifr.res.in/ncra/for-public/transit-of-venus ಅಥವ transitofvenusncra.wordpress.com ಎಂಬಲ್ಲಿಗೆ ಹೋಗಿ. ಕನ್ನಡದ ಅನುವಾದವನ್ನು ನೆಟ್ಟಗೆ ಇಳಿಸಿಕೊಳ್ಳಬೇಕೆಂದರೆ transit_of_venus_ncra_kannada_hires.pdf ಅನ್ನು ನೋಡಿ.